ಸಾಲೊಮನ್
	ಕ್ರಿ.ಪೂ. 974-934 ಇಸ್ರೇಲ್ ದೇಶದ ಪ್ರಸಿದ್ಧ ದೊರೆ. ಡೇವಿಡ್ ಮತ್ತು ಅವನ ಐಶ್ವರ್ಯವಂತ ಪತ್ನಿ ಬತ್‍ಶಿಬಾಳ ಮಗ. ಈತ ಇವರ ಎರಡನೆಯ ಮಗ. ಡೇವಿಡ್ ತನ್ನ ಮರಣದ ಸಮಯದಲ್ಲಿ ತನ್ನ ಅನಂತರ ಸಾಲೊಮನ್ ಸಿಂಹಾಸನವನ್ನೇರಬೇಕೆಂದು ಹೇಳಿದ. ಡೇವಿಡ್‍ನ ಇಚ್ಛೆಯಂತೆ 20 ವರ್ಷದ ಯುವಕ ಸಾಲೊಮನ್‍ಗೆ ಪಟ್ಟಾಭಿಷೇಕ ಮಾಡಲಾಯಿತು. ಈತ ಇಸ್ರೇಲ್ ಮತ್ತು ಜೂಡ ಪ್ರದೇಶಗಳನ್ನು ಸು. 40 ವರ್ಷಗಳ ಕಾಲ ಆಳಿದ.

	ಈತನ ಆಳಿಕೆಯಲ್ಲಿ ಶಾಂತಿ ಮತ್ತು ನೆಮ್ಮದಿಗಳಿದ್ದವು. ಈತ ಮೊದಲೇ ಬಲಿಷ್ಠವಾಗಿದ್ದ ತನ್ನ ರಾಜ್ಯವನ್ನು ಮತ್ತಷ್ಟು ಬಲಪಡಿಸಿದ. ತನ್ನ ಆಳಿಕೆಯ ಪ್ರಾರಂಭದಲ್ಲಿಯೇ ರಾಜ್ಯದ ಸುತ್ತುಮುತ್ತಲ ರಾಜ್ಯಗಳೊಡನೆ ಉತ್ತಮ ಸಂಬಂಧ ಏರ್ಪಡಿಸಿಕೊಂಡ. ಈಜಿಪ್ಟ್ ದೊರೆಯ ಮಗಳನ್ನು ವಿವಾಹವಾಗಿ ವರದಕ್ಷಿಣೆಯ ರೂಪದಲ್ಲಿ ಗೆಜಿಕ್ ಕೋಟೆಯನ್ನು ಪಡೆದ. ಆ ಕೋಟೆಯನ್ನು ಈತ ಪುನಃ ಕಟ್ಟಿಸಿದ. ಈತನ ತಂದೆ ಡೇವಿಡ್ ಟ್ಯರೆ ದೊರೆ ಹಿರಮ್‍ನೊಡನೆ ಮಾಡಿಕೊಂಡ ಮೈತ್ರಿಯಿಂದಾಗಿ ಈತ ಉತ್ತರಗಡಿಯಿಂದ ತೊಂದರೆಯಿಲ್ಲದೆ ಮತ್ತು ಭೂಮಧ್ಯ ಸಮುದ್ರದ ಮೂಲಕ ವ್ಯಾಪಾರ ಮಾಡಲು ಅನುಕೂಲ ವಾಯಿತು. ಇದರಿಂದ ಅಕಾಬಕೊಲ್ಲಿಯಲ್ಲಿರುವ ಬಂದರನ್ನು ಉಪಯೋಗಿ ಸಲು ಅನುಕೂಲವಾಯಿತು. ಇವನ ಆಳಿಕೆಯಲ್ಲಿ ಇಸ್ರೇಲ್ ಅತ್ಯುನ್ನತಿ ಯನ್ನು ಮುಟ್ಟಿತು. 

	ಈತ ಪ್ರಜೆಗಳ ಮನಸ್ಸನ್ನು ಯುದ್ಧದಿಂದ ಶಾಂತಿಯ ಜೀವನದತ್ತ ತಿರುಗಿಸಿದ. ದೇಶದಲ್ಲಿ ವ್ಯವಸ್ಥಿತ ಸಾಮಾಜಿಕ ಜೀವನಕ್ಕೆ ತಳಹದಿ ಹಾಕಿದ. ತನ್ನ ರಾಜಧಾನಿ ಜೆರೂಸಲೆಮನ್ನು ಸುಂದರಗೊಳಿಸಿದ. ಭವ್ಯವಾದ ಒಂದು ದೇವಾಲಯವನ್ನು ಕಟ್ಟಿಸಿದ. ಇವನು ಅಪೂರ್ವವಾದ ಜ್ಞಾನಕ್ಕೂ ಕಲಾಭಿಮಾನಕ್ಕೂ ಹೆಸರು ವಾಸಿಯಾದ. ವೈಭವದ ಭೋಗ ಜೀವನ ನಡೆಸಿದ. ಈತ ನಿರಂಕುಶ ರಾಜನಾಗಿದ್ದು ಆಡಳಿತದ ವಿಷಯದಲ್ಲಿ ಯಾರ ಸಲಹೆಯನ್ನೂ ಪಡೆಯದೆ ಚಾಣಾಕ್ಷತೆಯಿಂದ ಸ್ವತಃ ಆಡಳಿತ ನಡೆಸುತ್ತಿದ್ದ. ಇವನನ್ನು ಪ್ರವಾದಿಗಳು ಕೂಡ ಆಕ್ಷೇಪಿಸಲು ಹೆದರುತ್ತಿದ್ದರು. ಈತ ತನ್ನ ಅನೇಕ ಪತ್ನಿಯರ ತೃಪ್ತಿಗಾಗಿ ಅವರವರ ಧರ್ಮದ ದೇವರುಗಳನ್ನು ಆರಾಧಿಸುತ್ತಿದ್ದ. ಅದಕ್ಕಾಗಿ ಅನೇಕ ದೇವಾಲಯಗಳನ್ನೂ ಕಟ್ಟಿಸಿದ. ಇವನ ಜಾಣತನ ಪ್ರಪಂಚ ವಿಖ್ಯಾತವಾಗಿದೆ. ಈತನ ಬುದ್ಧಿವಂತಿಕೆ ಕುರಿತು ಅನೇಕ ಕಥೆಗಳಿವೆ. ಪಾಶ್ಚಾತ್ಯರಲ್ಲಿ ಬಹು ಪ್ರಸಿದ್ಧನಾದವನನ್ನು ಸಾಲೊಮನ್‍ನಷ್ಟು ಬುದ್ಧಿವಂತ ಎಂದು ಹೇಳುವುದು ವಾಡಿಕೆ.

												(ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ